ಅಭಿಪ್ರಾಯ / ಸಲಹೆಗಳು

ಸ್ಟ್ಯಾಂಪ್ ಡ್ಯೂಟಿ

ಪ್ರ.1

ಸ್ಟಾಂಪ್ ಡ್ಯೂಟಿ ಅಂದರೆ ಏನು?

ಉ:

ದಸ್ತಾವೇಜುಗಳ ಮೇಲೆ ಸರ್ಕಾರವು ವಿಧಿಸುವ ಮುದ್ರಾಂಕ ಶುಲ್ಕ ರೂಪದ ತೆರಿಗೆ

ಪ್ರ.2

ಯಾವ ದಸ್ತಾವೇಜುಗಳಿಗೆ ಕೇಂದ್ರ ಸರ್ಕಾರ ಸ್ಟಾಂಪ್ ಡ್ಯೂಟಿಯನ್ನು ವಿಧಿಸಬಹುದು?

ಉ:

ಈ ಕೆಳಗೆ ಹೆಸರಿಸಿರುವ ದಸ್ತಾವೇಜುಗಳ ಕುರಿತು ಸ್ಟಾಂಪ್ ಡ್ಯೂಟಿ ದರವನ್ನು ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

ಪ್ರ.3

ಯಾವ ದಸ್ತಾವೇಜುಗಳಿಗೆ ರಾಜ್ಯ ಸರ್ಕಾರ ಸ್ಟಾಂಪ್  ಡ್ಯೂಟಿ ವಿಧಿಸಬಹುದು?

ಉ:

ಕರ್ನಾಟಕ  ಮುದ್ರಾಂಕ ಕಾಯ್ದೆ 1957ರ ಷೆಡ್ಯೂಲ್ ನಲ್ಲಿ ಒಟ್ಟು 55 ತರಹದ ದಸ್ತಾವೇಜುಗಳಿಗೆ ಸ್ಟಾಂಪ್ ಡ್ಯೂಟಿ ದರವನ್ನು ಸರ್ಕಾರವು ನಿಗದಿಪಡಿಸಿದೆ. ಉದಾಹರಣೆಗೆ ಅಫಿಡವಿಟ್ ದತ್ತುಪತ್ರ, ಕ್ರಯ, ದಾನ ಬಾಡಿಗೆ, ಭೋಗ್ಯ, ಲೈಸೆನ್ಸ್ ಆಸ್ತಿಯ ವಿಭಾಗ ಹಾಗೂ ವ್ಯವಸ್ಥಾ ಪತ್ರಗಳ  ಇತ್ಯಾದಿ 55 ತರಹದ ದಸ್ತಾವೇಜುಗಳಿಗೆ ಸ್ಟಾಂಪ್ ಡ್ಯೂಟಿ ದರವನ್ನು ನಿಗದಿಪಡಿಸಿದೆ.

ಪ್ರ.4

ಸ್ಟಾಂಪ್ ಡ್ಯೂಟಿಯನ್ನು ಹೇಗೆ ಮತ್ತು ಎಲ್ಲಿ ಪಾವತಿ ಮಾಡಬಹುದು.

ಉ:

ಮುದ್ರಾಂಕ ಶುಲ್ಕವನ್ನು ಷೆಡ್ಯೂಲ್ ಬ್ಯಾಂಕ್ ಗಳಲ್ಲಿ ಡಿ.ಡಿ, ಫೀ ಆರ್ಡರ್, ಚಲನ್ ಮೂಲಕ ಪಾವತಿ ಮಾಡಿ ಜಿಲ್ಲಾ ನೋಂದಣಾಧಿಕಾರಿ/ ಉಪನೋಂದಣಾಧಿಕಾರಿಯವರಿಂದಾಗಲೀ ದಸ್ತಾವೇಜಿನ ಮೇಲೆ ಮುದ್ರಾಂಕ ಪಾವತಿ ಮಾಡಿದ  ಬಗ್ಗೆ ದೃಢೀಕರಿಸಿಕೊಳ್ಳಬಹುದು.

ಅ) ದಸ್ತಾವೇಜನ್ನು ಖಾಲಿ ಹಾಳೆಯ ಮೇಲೆ ಬರೆದು ನಂತರ  ಎರಡು ತಿಂಗಳೊಳಗೆ ಅಂಗೀಕೃತ ಬ್ಯಾಂಕ್ ಗಳಲ್ಲಿ ಡಿ.ಡಿ / ಚಲನ್ ಮೂಲಕವಾಗಲಿ ಸರ್ಕಾರಕ್ಕೆ ಹಣ ಪಾವತಿ ಮಾಡಿ ಸಂಬಂಧಪಟ್ಟ ಜಿಲ್ಲಾನೋಂದಣಾಧಿಕಾರಿಗಳಿಂದಾಗಲಿ ಉಪನೋಂದಣಾಧಿಕಾರಿಗಳಿಂದಾಗಲಿ ದಸ್ತಾವೇಜಿನ ಮೇಲೆ ಸ್ಟಾಂಪ್ ಡ್ಯೂಟಿ ತುಂಬಿದ ಬಗ್ಗೆ ದೃಢೀಕರಿಸಿಕೊಳ್ಳಬಹುದಾಗಿದೆ.

ಆ) ದಿನಾಂಕ: 01-04-2003 ರಿಂದ ಮುದ್ರಾಂಕ ಕಾಗದಗಳ ಬಳಕೆಯನ್ನು ಸ್ಥಗಿತಗೊಳಿಸಿದ್ದರಿಂದ ಮುದ್ರಾಂಕ ವಸೂಲು ಮಾಡುವ /  ವಿತರಿಸುವ ಜವಾಬ್ದಾರಿಯನ್ನು ಬ್ಯಾಂಕುಗಳಿಗೆ ವಹಿಸಲಾಯಿತು. ಇದಕ್ಕೆ  ಪರ್ಯಾಯವಾಗಿ ಇ-ಸ್ಟಾಂಪಿಂಗ್ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ಯೋಚಿಸಿದ್ದು, ಇ-ಸ್ಟಾಂಪಿಂಗ್ ಪದ್ಧತಿಯು ಒಂದು  ವಿದ್ಯುನ್ಮಾನ ಆಧಾರಿತ ಸೇವೆಯಾಗಿರುತ್ತದೆ. ಈ ಪದ್ಧತಿಯನ್ನು ಮಾರ್ಚ್ ತಿಂಗಳಲ್ಲಿ ಫೈಲಟ್ ಆಧಾರದ ಮೇಲೆ ಬೆಂಗಳೂರಿನ 8 ಕಡೆ ಜಾರಿಗೆ ತರಲಾಗುತ್ತಿದ್ದು, ಈ ಪದ್ಧತಿಯು ಯಶಸ್ವಿಯಾದಲ್ಲಿ ಹಾಲಿ ಚಾಲ್ತಿಯಲ್ಲಿರುವ ಬ್ಯಾಂಕ್ ಗಳು ವಿತರಿಸುತ್ತಿರುವ ದಸ್ತಾವೇಜುಗಳ ಹಾಳೆಗಳಿಗೆ ಪರ್ಯಾಯವಾಗಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಜಾರಿಗೆ ತರಲಾಗುವುದು.

 ಪ್ರ.5

ಒಂದು ಉದ್ದೇಶಕ್ಕಾಗಿ ಸ್ಟಾಂಪನ್ನು ಉಪಯೋಗಿಸಿದ ನಂತರ ಬೇರೆ ವ್ಯವಹಾರಕ್ಕೆ ಬಳಸಬಹುದೇ?

ಉ:

ಬಳಸುವಂತಿಲ್ಲ. ಒಂದು ಉದ್ದೇಶಕ್ಕಾಗಿ ಸ್ಟಾಂಪನ್ನು ಉಪಯೋಗಿಸಿದ  ನಂತರ ಅದೇ ಸ್ಟಾಂಪ್ ಬೇರೆ ಉದ್ದೇಶಕ್ಕಾಗಿ ಉಪಯೋಗಿಸುವಂತಿಲ್ಲ.

ಉದಾಹರಣೆಗೆ: ಒಂದು ಉದ್ದೇಶಕ್ಕಾಗಿ ಅಫಿಡವಿಟ್ ಬರೆದು ಮುದ್ರಾಂಕ ಶುಲ್ಕ ಪಾವತಿಸಿ ನಂತರ ಅದನ್ನು ಬೇರೆ ಉದ್ದೇಶಕ್ಕಾಗಿ ಬಳಸಲು ಬರುವುದಿಲ್ಲ.

ಪ್ರ.6

ಸ್ಟಾಂಪ್ ಡ್ಯೂಟಿಯನ್ನು ಯಾವ ಸಮಯದಲ್ಲಿ ಪಾವತಿ ಮಾಡಬೇಕು?

ಉ:

ಕರ್ನಾಟಕ ರಾಜ್ಯದಲ್ಲಿ ಯಾವುದೇ ವ್ಯಕ್ತಿಯು  ದಸ್ತಾವೇಜು ಬರೆದುಕೊಡುವ ಮೊದಲು ಅಥವಾ ಬರೆದುಕೊಟ್ಟ ದಿನದಂದು ಸ್ಟಾಂಪ್ ಡ್ಯೂಟಿಯನ್ನು ಪಾವತಿ ಮಾಡಬೇಕಾಗುತ್ತದೆ. ದಸ್ತಾವೇಜನ್ನು ಖಾಲಿ ಹಾಳೆಯ ಮೇಲೆ ಬರೆದು ನಂತರ ಎರಡು ತಿಂಗಳೊಳಗೆ  ಷೆಡ್ಯೂಲ್ ಬ್ಯಾಂಕ್ ಗಳಲ್ಲಿ ಡಿ.ಡಿ / ಚಲನ್ ಮೂಲಕವಾಗಲಿ ಸರ್ಕಾರಕ್ಕೆ ಹಣ ಪಾವತಿ ಮಾಡಿ ಸಂಬಂಧಪಟ್ಟ ಜಿಲ್ಲಾನೋಂದಣಾಧಿಕಾರಿಗಳಿಂದಾಗಲಿ, ಉಪನೋಂದಣಾಧಿಕಾರಿಗಳಿಂದಾಗಲಿ ಈ ದಸ್ತಾವೇಜಿನ ಮೇಲೆ ಸ್ಟಾಂಪ್ ಡ್ಯೂಟಿ ತುಂಬಿದ  ಬಗ್ಗೆ ದೃಢೀಕರಿಸಿಕೊಳ್ಳಬಹುದಾಗಿದೆ.

ಪ್ರ.7

ವಿದೇಶದಲ್ಲಿ  ಬರೆದುಕೊಟ್ಟ ದಸ್ತಾವೇಜನ್ನು ನಮ್ಮ ರಾಜ್ಯದಲ್ಲಿ ಉಪಯೋಗಿಸುವಂತಿದ್ದರೆ ಸ್ಟಾಂಪ್ ಡ್ಯೂಟಿ ತುಂಬಬೇಕೆ? ಹಾಗಿದ್ದಲ್ಲಿ ಅದಕ್ಕೆ ಅನುಸರಿಸುವ ವಿಧಾನವೇನು?

ಉ:

ವಿದೇಶದಲ್ಲಿ ಬರೆದುಕೊಟ್ಟ ದಸ್ತಾವೇಜು ನಮ್ಮ ರಾಜ್ಯದೊಳಗೆ ಸಂಬಂಧಪಟ್ಟವರಿಗೆ ತಲುಪಿದ 3 ತಿಂಗಳೊಳಗಾಗಿ ಆಯಾ ಜಿಲ್ಲೆಯ ಜಿಲ್ಲಾನೋಂದಣಾಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗಿ ಸ್ಟಾಂಪ್ ಡ್ಯೂಟಿ ಜಮಾ ಮಾಡಿ ಇಂತಹ ದಸ್ತಾವೇಜನ್ನು ದೃಢೀಕರಿಸಿಕೊಳ್ಳಬಹುದಾಗಿದೆ.

ಪ್ರ.8

ಕರ್ನಾಟಕ ರಾಜ್ಯದಲ್ಲಿರುವ ಆಸ್ತಿಗಳ ಕುರಿತು ಇತರೆ ರಾಜ್ಯಗಳಲ್ಲಿ ದಸ್ತಾವೇಜು ಬರೆಯಿಸಿಕೊಂಡಿದ್ದರೆ ಅಂತಹ ದಸ್ತಾವೇಜುಗಳ ಮೇಲೆ ಸರ್ಕಾರ ನಿಗದಿಪಡಿಸಿದ ಸ್ಟಾಂಪ್ ಡ್ಯೂಟಿ ಪಾವತಿ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಅನುಸರಿಸುವ ವಿಧಾನವೇನು?

ಉ:

ಕರ್ನಾಟಕ ರಾಜ್ಯದಲ್ಲಿನ ಆಸ್ತಿಗಳ ಕುರಿತು ಭಾರತದ ಇತರೆ ರಾಜ್ಯದಲ್ಲಿನ  ಸ್ಟಾಂಪ್ ಡ್ಯೂಟಿ ಖರೀದಿಸಿದ ದಸ್ತಾವೇಜನ್ನು  ಬರೆದುಕೊಟ್ಟಿದ್ದರೆ ಈ ಸ್ಟಾಂಪ್ ಡ್ಯೂಟಿ ಹಣವನ್ನು ಕರ್ನಾಟಕ ರಾಜ್ಯದಲ್ಲಿ ಇಂತಹ  ದಸ್ತಾವೇಜುಗಳಿಗೆ  ನಿಗದಿಪಡಿಸಿದ ಒಟ್ಟು ಸ್ಟಾಂಪ್ ಡ್ಯೂಟಿಯಲ್ಲಿ ಈಗಾಗಲೇ ಪಾವತಿ ಮಾಡಿರುವ ಸ್ಟಾಂಪ್ ಡ್ಯೂಟಿಯನ್ನು ಕಡಿತಗೊಳಿಸಿ ವ್ಯತ್ಯಾಸದ ಸ್ಟಾಂಪ್ ಡ್ಯೂಟಿಯನ್ನು ಭರಿಸಬೇಕಾಗುತ್ತದೆ.

ಪ್ರ.9

 ಸಾಲದ ಭದ್ರತೆಗೆ ಬರೆದುಕೊಟ್ಟ ದಸ್ತಾವೇಜಿನಲ್ಲಿ ವಿವರಿಸಿದ ಬಡ್ಡಿಯ ಹಣದ ಮೇಲೆಯೂ ಸಹ ಸ್ಟಾಂಪ್ ಡ್ಯೂಟಿ ತುಂಬಬೇಕಾಗುತ್ತದೆಯೇ?

ಉ:

ಇಲ್ಲ ಸಾಲದ ಹಣದ ಮೇಲೆ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆಯೇ ಹೊರತು ಬಡ್ಡಿ ಹಣದ ಮೇಲೆ ಸ್ಟಾಂಪ್ ಡ್ಯೂಟಿ ಆಕರಣೆ ಇಲ್ಲ.

ಪ್ರ.10

ಅಡಮಾನ / ಆಧಾರವಿಟ್ಟುಕೊಂಡ ಸ್ವತ್ತನ್ನು ಅಡಮಾನ / ಆಧಾರ ಪಡೆದವರೇ ಖರೀದಿಸಿದರೆ ಸ್ಟಾಂಪ್ ಡ್ಯೂಟಿ ವಿನಾಯಿತಿ ಉಂಟೇ

ಉ:

ವಿನಾಯಿತಿ ಇದೆ, ಅಡಮಾನ /  ಆಧಾರ ಪತ್ರಕ್ಕೆ  (Mortgage Deed)  ಪಾವತಿ ಮಾಡಿದ ಸ್ಟಾಂಪ್ ಡ್ಯೂಟಿಯಷ್ಟು ವಿನಾಯಿತಿ ಇದೆ.

ಪ್ರ.11

ದಸ್ತಾವೇಜಿನಲ್ಲಿ ನಮೂದಿಸಿದ ವರ್ಷಾಸನ ಮೇಲೆ ಎಷ್ಟು ಸ್ಟಾಂಪ್ ಡ್ಯೂಟಿ ತುಂಬ ಬೇಕಾಗುತ್ತದೆ?

ಉ:

ನಿಯತಕಾಲಿಕವಾಗಿ ಪಾವತಿಮಾಡಬೇಕಾದ ಹಣ ಪಡೆಯುವುದಕ್ಕಾಗಿ ಹಣ ಪಡೆಯುವುದಕ್ಕಾಗಿ ಬರೆದುಕೊಡುವ ದಸ್ತಾವೇಜಿಗೆ ಈ ಕೆಳಗಿನ ಸಂದರ್ಭಕ್ಕೆ ಅನುಸಾರವಾಗಿ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಬೇಕಾಗುತ್ತದೆ.

ಅ) ಪಾವತಿ ಮಾಡಬೇಕಾದ ಒಟ್ಟು ಹಣವನ್ನು ಮೊದಲೇ ನಿರ್ಧರಿಸಿದಲ್ಲಿ ಆ ಒಟ್ಟು ಹಣದ ಮೇಲೆ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಆ) ಅನಿಶ್ಚಿತ ಕಾಲ ಹಣ ಪಾವತಿ ಮಾಡುವಂತಿದ್ದರೆ ಮೊದಲನೇ 20 ವರ್ಷದಲ್ಲಿ ಪಾವತಿ ಮಾಡುವ ಒಟ್ಟು ಹಣದ ಮೇಲೆ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಇ) ವರ್ಷಾಸನ ಪಡೆಯುವವರು ಮೃತಪಟ್ಟ ಮೇಲೆ ವರ್ಷಾಸನ ನೀಡುವುದು ಕೊನೆಗೊಳ್ಳುವಂತಿದ್ದರೆ ಮೊದಲನೇ 12 ವರ್ಷದಲ್ಲಿ ಪಾವತಿ ಮಾಡುವ ಒಟ್ಟು ಹಣದ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಪ್ರ.12

ಒಂದು ವ್ಯವಹಾರದಲ್ಲಿ ಸಾಮಾನ್ಯವಾಗಿ ಇಬ್ಬರು ಪಾರ್ಟಿಗಳು ಇರುತ್ತಾರೆ ಅಂದರೆ ಒಬ್ಬರು ಬರೆಸಿಕೊಳ್ಳುವವರು ಇನ್ನೊಬ್ಬರು ಬರೆದು ಕೊಡುವವರು ಇವರಲ್ಲಿ ಯಾರಿಗೆ ಸ್ಟಾಂಪ್ ಡ್ಯೂಟಿ ಪಾವತಿಸುವ ಜವಾಬ್ದಾರಿ ಇರುತ್ತದೆ?

ಉ:

ಒಂದು ವ್ಯವಹಾರದಲ್ಲಿ ಸ್ಟಾಂಪ್ ಡ್ಯೂಟಿಯನ್ನು ಯಾರುಪಾವತಿಬೇಕೆಂದು ಮೊದಲೇ ಕರಾರು ಮಾಡಿಕೊಂಡಿರುತ್ತಾರೋ ಆ ಕರಾರಿನಂತೆ ಸ್ಟಾಂಪ್ ಡ್ಯೂಟಿ  ಪಾವತಿಸಬೇಕಾಗುತ್ತದೆ, ಒಂದು ವೇಳೆ ಯಾರು ಸ್ಟಾಂಪ್ ಡ್ಯೂಟಿ ಪಾವತಿಸಬೇಕೆಂದು ಕರಾರು ಮಾಡಿಕೊಂಡಿರದಿದ್ದಲ್ಲಿ ಈ ಕೆಳಗೆ ವಿವಸಿದವರು ಸ್ಟಾಂಪ್ ಡ್ಯೂಟಿ ಪಾವತಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಅ) ಠೇವಣಿ, ಗಿರವಿ ಅಥವಾ ಒತ್ತೆ ಇವುಗಳಿಗೆ ಸಂಬಂಧಪಟ್ಟ ಕರಾರುಪತ್ರ.

ಆ) ಮೊದಲು ಋಣಭಾರ  ಪಡೆದು ಇನ್ನಷ್ಟು ಋಣಭಾರ ಪಡೆಯುವ ಸಂದರ್ಭದಲ್ಲಿ ಬರೆದುಕೊಡುವ ಪತ್ರ, ಇಂಡೆಮ್ನಿಟಿ,(  ನಷ್ಟ ಭರ್ತಿ ಪತ್ರ) ಅಡಮಾನ, ಬಿಡುಗಡೆ ವ್ಯವಸ್ಥಾಪಕ ಪತ್ರಗಳು.

ಮೇಲೆ ವಿವರಿಸಿದ ದಸ್ತಾವೇಜುಗಳನ್ನು ಯಾರು ಬರೆದುಕೊಡುತ್ತಾರೋ ಅವರೇ ಸ್ಟಾಂಪ್ ಡ್ಯೂಟಿಯನ್ನು ಪಾವವತಿಸಬೇಕಾಗುತ್ತದೆ.

ಇ) ಹಸ್ತಾಂತರ ಪತ್ರಕ್ಕೆ ಯಾರು ಹಸ್ತಾಂತರ ಪಡೆಯುತ್ತಾರೆಯೋ ಅವರು ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಉದಾ: ಸ್ವತ್ತಿನ ಖರೀದಿ ವ್ಯವಾಹಾರದಲ್ಲಿ ಸ್ವತ್ತನ್ನು ಖರೀದಿಗೆ ತೆಗೆದುಕೊಂಡವರು ಸ್ಟಾಂಪ್ ಡ್ಯೂಟಿಯನ್ನು ಪಾವತಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಈ) ಲೀಸ್ ಪತ್ರದಲ್ಲಿ ಲೀಸ್ ಪಡೆಯುವವರು.

ಉ) ಪವರ್ ಆಫ್ ಅಟಾರ್ನಿ ಪತ್ರಕ್ಕೆ ಯಾರು ಪವರ್ ಆಫ್ ಅಟಾರ್ನಿ ಬರೆದುಕೊಡುತ್ತಾರೆಯೋ ಅವರು ಸ್ಟಾಂಪ್ ಡ್ಯೂಟಿಯನ್ನುಯ ಪಾವತಿಸಬೇಕಾಗುತ್ತದೆ.

ಊ) ಮಾರಾಟದ ಸರ್ಟಿಫಿಕೇಟ್ (ಸರ್ಟಿಫಿಕೇಟ್ ಆಫ್ ಸೇಲ್ ) ಹರಾಜಿನಲ್ಲಿ ಯಾರು ಖರೀದಿಸಿರುತ್ತಾರೋ ಅವರು ಸ್ಟಾಂಪ್ ಡ್ಯೂಟಿಯನ್ನು ಪಾವತಿಸಬೇಕಾಗುತ್ತದೆ.

ಋ) ಅದಲು ಬದಲು ಪತ್ರ(ಎಕ್ಸ್ ಚೇಂಜ್ ಡೀಡ್) ಈ ದಸ್ತಾವೇಜಿಗೆ ಸ್ಟಾಂಪ್ ಡ್ಯೂಟಿಯನ್ನು ಇಬ್ಬರು ಸಮವಾಗಿ ಪಾವತಿ ಮಾಡಬೇಕಾಗುತ್ತದೆ.

 ಎ) ಪಾಲು ಪಟ್ಟಿ (ಪಾರ್ಟಿಷನ್ ಡೀಡ್) ದಸ್ತಾವೇಜಿನಲ್ಲಿ ಅವರವರ ಪಾಲಿಗೆ ಅನುಗುಣವಾಗಿ ಸ್ಟಾಂಪ್ ಡ್ಯೂಟಿಯನ್ನು ಪಾವತಿ ಮಾಡಬೇಕಾಗುತ್ತದೆ.

ಪ್ರ.13

ಒಂದು ದಸ್ತಾವೇಜಿಗೆ ಸ್ಟಾಂಪ್ ಡ್ಯೂಟಿ ಎಷ್ಟು ಪಾವತಿ ಮಾಡಬೇಕು ಎಂಬ ಬಗ್ಗೆ ಸಂಶಯ ಬಂದಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಿಂದ ಧೃಡೀಕೃತ ಅಭಿಪ್ರಾಯವನ್ನು ಪಡೆಯಲು ಅವಕಾಶವಿದೆಯೇ? ಹಾಗಿದಲ್ಲಿ ಅನುಸರಿಸಬೇಕಾದ ವಿಧಾನವೇನು?

ಉ:

ಒಂದು ದಸ್ತಾವೇಜಿಗೆ ಸ್ಟಾಂಪ್ ಡ್ಯೂಟಿ ಎಷ್ಟು ಪಾವತಿ ಮಾಡಬೇಕೆಂಬ ಬಗ್ಗೆ ಸಂಶಯ ಬಂದಲ್ಲಿ ಸ್ಥಳೀಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ಈ ಕೆಳಕಂಡ ದಾಖಲೆಗಳೊಂದಿಗೆ  ಅರ್ಜಿ ಸಲ್ಲಿಸಬೇಕಾಗುತ್ತದೆ.

ಅ) ಉದ್ದೇಶಿಸಿದ ದಸ್ತಾವೇಜಿನ ದಸ್ತಾವೇಜಿನ ಯಥಾಪ್ರತಿ.

ಆ) ಅಫಿಡವಿಟ್ (ರೂ. 20/- ರ ಮುದ್ರಾಂಕ  ಶುಲ್ಕ ಪಾವತಿಸಿದ ಕಾಗದ)

ಇ) ರೂ. 100/- ಫೀ.

 ಅರ್ಜಿಯನ್ನು ಸ್ವೀಕರಿಸಿದ ಮೇಲೆ ಸಂಬಂಧಪಟ್ಟವರ ವಾದವನ್ನು ಕೇಳಿ ಸ್ಟಾಂಪ್ ಡ್ಯೂಟಿ ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ನಿರ್ಧರಿಸಲಾಗುವುದು.

ಪ್ರ.14

ಸ್ಟಾಂಪ್ ಡ್ಯೂಟಿ ಪಾವತಿಸದಿದ್ದರೆ ಏನಾಗುತ್ತದೆ?

ಉ:

ನಿಯಮಾನುಸಾರ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾದ ದಸ್ತಾವೇಜಿಗೆ ಸ್ಟಾಂಪ್ ಡ್ಯೂಟಿ ಪಾವತಿ ಮಾಡದಿದ್ದಲ್ಲಿ ದಸ್ತಾವೇಜನ್ನು ಸಾಕ್ಷಿಯಾಗಿ ಸ್ವೀಕರಿಸಲಾಗುದುದಿಲ್ಲ. ಅಲ್ಲದೆ ಇಂತಹ ದಸ್ತಾವೇಜಿನ ಆಧಾರದ ಮೇಲೆ ಯಾವುದೆಏ ವ್ಯವಹಾರವು ಸಹ ನಡೆಯುವುದಿಲ್ಲ. ಸ್ಟಾಂಪ್ ಪಾವತಿಸದೆ ಇರುವ ಅಥವಾ ಕಡಿಮೆ ಸ್ಟಾಂಪ್ ಪಾವತಿಸಿದ ದಸ್ತಾವೇಜುಗಳನ್ನು ಸಾರ್ವಜನಿಕ ಅಧಿಕಾರಿಗಳಿಗೆ (ಪೊಲೀಸ್ ಅಧಿಕಾರಿಗಳನ್ನು ಹೊರತುಪಡಿಸಿ) ಹಾಜರುಪಡಿಸಿದಲ್ಲಿ ಅವರು ಇಂಪೌಂಡ್ (ಪರಿಬದ್ಧ) ಮಾಡುತ್ತಾರೆ. ಸರಿಯಾದ ಸ್ಟಾಂಪ್ ಡ್ಯೂಟಿಯೊಂದಿಗೆ ದಂಡವನ್ನೂ ಸಹ ಸೇರಿಸಿ ಪಾವತಿ ಮಾಡಬೇಕಾಗುತ್ತದೆ.

ಪ್ರ.15

ದಸ್ತಾವೇಜು ಇಂಪೌಂಡ್ ಆದ ಮೇಲೆ ಅನುಸರಿಸಬೇಕಾದ ಕ್ರಮಗಳು ಏನು?

ಉ:

ಅ) ಸಾರ್ವಜನಿಕ ಅಧಿಕಾರಿಯು ಸ್ಟಾಂಪ್ ಡ್ಯೂಟಿ ಕಡಿಮೆ ಆಗಿದೆ ಎಂದು ಇಂಪೌಂಡದ್ ಮಾಡಿದ ಮೇಲೆ ಅವರು ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿಗಳಿಗೆ ( ಜಿಲ್ಲಾ ನೋಂದಣಾಧಿಕಾರಿಗಳೆ ಸ್ಟ್ಯಾಂಪ್ ಡೆಪ್ಯೂಟಿ ಕಮೀಷನರ್ ಆಗಿರುತ್ತಾರೆ)  ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿ ಎಷ್ಟು ಎಂಬುದನ್ನು ನಿರ್ಧರಿಸಲು ಕಳುಹಿಸಿಕೊಡುತ್ತಾರೆ.

ಆ) ಜಿಲ್ಲಾ ನೋಂದಣಾಧಿಕಾರಿಗಳು ಸಂಬಂಧಪಟ್ಟವರ ವಾದವನ್ನು ಕೇಳಿ  ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿ ಎಷ್ಟು ಎಂಬುದನ್ನು ನಿರ್ಧರಿಸಿರುತ್ತಾರೆ. ಇದರೊಂದಿಗೆ  ಆಯಾ ಪ್ರಕರಣಗಳ ಸ್ಥಿತಿಯ ಆಧಾರದ ಮೇಲೆ ಕನಿಷ್ಟ 5 ರೂಪಾಯಿಗಳಿಗಿಂತ ಕಡಿಮೆ  ಇಲ್ಲದಂತೆ ಅಥವಾ ಸರಿಯಾಗಿ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿಯ 10ರಷ್ಟು ದಂಡ ವಿಧಿಸಬಹುದು.

ಇ) ಜಿಲ್ಲಾ ನೋಂದಣಾಧಿಕಾರಿಗಳ ಈ ಆದೇಶದ ಮೇಲೆ ಮುಖ್ಯ ನಿಯಂತ್ರ ರಾಜಸ್ವ ಪ್ರಾಧಿಕಾರಿಗಳಿಗೆ ಮೇಲ್ಮನವಿ (ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು) ತದನಂತರ ಗೌರವಾನ್ವಿತ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಬಹುದಾಗಿದೆ.

ಪ್ರ.16

ಜರೂರು ಸಮಯದಲ್ಲಿ ದಸ್ತಾವೇಜನ್ನು ಲಭ್ಯವಿರುವ ಸ್ಟಾಂಪಿನ ಮೇಲಾಗಲಿ ಅಥವಾ ಖಾಲಿ ಹಾಳೆಯ ಮೇಲಾಗಲಿ ಬರೆದುಕೊಟ್ಟ ದಸ್ತಾವೇಜುಗಳ ಕುರಿತು ಸ್ಟಾಂಪ್ ಡ್ಯೂಟಿ ಪಾವತಿಸಲು ಖುದ್ದಾಗಿ ಮುಂದೆ ಬಂದರೆ ದಂಡವನ್ನು ವಿಧಿಸದೆ ಸ್ಟಾಂಪ್ ಡ್ಯೂಟಿ ಪಾವತಿ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ?

ಉ:

ಅವಕಾಶವಿದೆ. ಕಡಿಮೆ ಸ್ಟಾಂಪ್ ಡ್ಯೂಟಿ ಪಾವತಿಸಿದ ಪ್ರಕರಣಗಳಲ್ಲಿ ಸಂಬಂಧಪಟ್ಟವರು ಸ್ಟಾಂಪ್ ಡ್ಯೂಟಿ ಪಾವತಿಸಲು ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕದಿಂದ ಒಂದು ವರ್ಷದ ಒಳಗೆ  ಸ್ವಯಂ ಪ್ರೇರಿತರಾಗಿ ಮುಂದೆ ಬಂದಲ್ಲಿ ಸ್ಥಳೀಯ ಉಪನೋಂದಣಾಧಿಕಾರಿಗಳು ಸರಿಯಾದ ಸ್ಟಾಂಪ್ ಡ್ಯೂಟಿಯನ್ನು ಪಡೆದು ದಸ್ತಾವೇಜಿನ ಮೇಲೆ ದೃಢೀಕರಿಸುತ್ತಾರೆ. ಇಂತಹ ಸಂದರ್ಭದಲ್ಲಿ ದಂಡವನ್ನು ವಸೂಲು ಮಾಡಲಾಗುವುದಿಲ್ಲ.

ಪ್ರ.17

ಇಂಪೌಂಡ್ ಆದ ಪ್ರಕರಣಗಳಲ್ಲಿ ವಿಧಿಸಿದ ದಂಡವನ್ನು ಮರುಪಾವತಿ ಪಡೆಯಲು ಅವಕಾಶವಿದೆಯೇ?

ಉ:

ಅವಕಾಶವಿದೆ. ಮುಖ್ಯ ನಿಯಂತ್ರಕ ರಾಜಸ್ವ ಪ್ರಾಧಿಕಾರಿ (ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು) ರವರಿಗೆ ಇಂತಹ ದಂಡವನ್ನು ಪಾವತಿ ಮಾಡಿದ ಒಂದು ವರ್ಷದೊಳಗಾಗಿ ಅಪೀಲ್ ಸಲ್ಲಿಸಬಹುದು.

ಪ್ರ.18

ಆಸ್ತಿಯ ಅಪಮೌಲ್ಯ ಅಂದರೆ ಏನು?

ಉ:

ಆಸ್ತಿಯ ಮೌಲ್ಯಧಾರದ ಮೇಲೆ ಸರ್ಕಾರಕ್ಕೆ ಸ್ಟಾಂಪ್ ಡ್ಯೂಟಿಯನ್ನು ಪಾವತಿ ಮಾಡುವಂತಹ ಸಂದರ್ಭದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಪ್ರಕರಣ 2(mm) ದಲ್ಲಿ ವ್ಯಾಖ್ಯಾನಿಸಿರುವ “ಮಾರುಕಟ್ಟೆ ಮೌಲ್ಯದಂತೆ” ಸ್ಟಾಂಪ್ ಡ್ಯೂಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಪ್ರತಿಯೊಂದು ತಾಲ್ಲೂಕಿನಲ್ಲಿ ಆಸ್ತಿಯ ಮೌಲ್ಯವನ್ನು ಅಂದಾಜು ಮಾಡಲು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಪ್ರಕರಣ 45- ಬಿ ಯಂತೆ ಸಮಿತಿಯನ್ನು ರಚಿಸಿದೆ. ಈ ಸಮಿತಿಯವರು ಕಾಲಕಾಲಕ್ಕೆ ಉಪನೋಂದಣಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಅಂದಾಜು ಮೌಲ್ಯವನ್ನು (ಮಾರ್ಗಸೂಚಿಮೌಲ್ಯ) ಪ್ರಕಟಿಸಿರುತ್ತಾರೆ. ಈ ಅಂದಾಜು ಮೌಲ್ಯಕ್ಕಿಂತ (ಮಾರ್ಗಸೂಚಿಮೌಲ್ಯ) ಕಡಿಮೆ ಮೌಲ್ಯದಂತೆ ಒಂದು ವೇಳೆ ಪ್ರತಿಫಲದ ಹಣ ಇದ್ದು ಮೌಲ್ಯಕ್ಕೆ ಅನ್ವಯವಾಗುವಂತೆ ಸರ್ಕಾರಕ್ಕೆ ಸ್ಟಾಂಪ್ ಡ್ಯೂಟಿ ಪಾವತಿಸದಿದ್ದಲ್ಲಿ ಅಂತಹ ಪ್ರಕರಣಗಳನ್ನು ಅಪಮೌಲ್ಯ ಪ್ರಕರಣವೆಂದು ಪರಿಗಣಿಸಲಾಗುತ್ತದೆ.

ಪ್ರ.19

ನಕಲಿ ಸ್ಟಾಂಪ್ ಪೇಪರ್ ಬಳಕೆಯನ್ನು ಹೇಗೆ ನಿಷೇಧಿಸಬಹುದು?

ಉ:

ಕರ್ನಾಟಕ ರಾಜ್ಯದಲ್ಲಿ ದಿನಾಂಕ: 01-04-2003 ರಿಂದ ಮುದ್ರಾಂಕ ಕಾಗದಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.   ದಸ್ತಾವೇಜುಗಳನ್ನು ರೂ.2-00ರ ದಸ್ತಾವೇಜು ಹಾಳೆ ಅಥವಾ ಖಾಲಿ ಪೇಪರ್ ಮೇಲೆ ಬರೆಯಬಹುದು.

ಮುದ್ರಾಂಕ ಶುಲ್ಕವನ್ನು ಆಯಾ ಉಪನೋಂದಣಾಧಿಕಾರಿ ಕಛೇರಿಯ ವ್ಯಾಪ್ತಿಯ ಷೆಡ್ಯೂಲ್ ಬ್ಯಾಂಕ್ ಗಳಲ್ಲಿ ಡಿ.ಡಿ, ಫೀ ಆರ್ಡರ್, ಚಲನ್ ಮೂಲಕ ಪಾವತಿಸಬಹುದು.

ಪ್ರ.20

ಕುಟುಂಬದ ಸದಸ್ಯರಿಗೆ ಆಸ್ತಿಯ ದಾನ ಪತ್ರ ಮಾಡಿದಲ್ಲಿ ಸ್ಟಾಂಪ್ ಡ್ಯೂಟಿ ರಿಯಾಯಿತಿ ಇದೆಯೇ?

ಉ:

 ರಿಯಾಯಿತಿ ಇದೆ. ದಾನ ಪತ್ರ ಬರೆದುಕೊಡುವವರಿಗೆ ಸಂಬಂಧಿಕರಾದ ಗಂಡ, ಹೆಂಡತಿ, ಮಗ, ಮಗಳು, ಸಹೋದರ, ಸಹೋದರಿಯರು, ಸೊಸೆ ಮತ್ತು ಮೊಮ್ಮಕ್ಕಳು ಇವರಿಗೆ ದಾನ ಪತ್ರ ಬರೆದುಕೊಟ್ಟಲ್ಲಿ ನಿಗದಿತ ಸ್ಟಾಂಪ್ ಡ್ಯೂಟಿ ಒಂದು ಸಾವಿರ ರೂಪಾಯಿ, ಸ್ಥಳೀಯ ಸಂಸ್ಥೆಗೆ ಹೆಚ್ಚುವರಿ ಮುದ್ರಾಂಕ ಶುಲ್ಕದ ಮೇಲೆ 2% ಅಥವಾ 3% ಸರ್ಜಾರ್ಜ್ ಸ್ಟಾಂಪ್ ಡ್ಯೂಟಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಪ್ರ.21

ಒಟ್ಟು ಕುಟುಂಬದ ಆಸ್ತಿಯನ್ನು  ವಿಭಾಗ ಮಾಡಿಕೊಂಡಲ್ಲಿ ಎಷ್ಟು ಸ್ಟಾಂಪ್ ಡ್ಯೂಟಿಯನ್ನು ಪಾವತಿಸಬೇಕಾಗುತ್ತದೆ?

ಉ:

ಒಟ್ಟು ಕುಟುಂಬದ  ಆಸ್ತಿಯನ್ನು ವಿಭಾಗ ಮಾಡಿಕೊಂಡಲ್ಲಿ ಈ ಕೆಳಗೆ ವಿವರಿಸಿದ ರೀತಿ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಅ) ವಿಭಾಗ ಮಾಡಿಕೊಳ್ಳಲಾದ ಆಸ್ತಿಯು ಕೃಷಿಯೇತರ ಆಸ್ತಿಯಾಗಿದ್ದು

 

i) ಆಸ್ತಿಯು ಪರಸಭೆ ಅಥವಾ ನಗರಸಭೆ ಅಥವಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೆ

ಪ್ರತಿ ಪಾಲಿಗೆ (ಷೇರಿಗೆ) ರೂ.1,000-00 ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಫೀ ರೂ.500-00

ii) ಆಸ್ತಿ ಬೇರೆ ಪ್ರದೇಶದಲ್ಲಿ ಇದ್ದರೆ

ಪ್ರತಿ ಪಾಲಿಗೆ (ಷೇರಿಗೆ) ರೂ.500-00 ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಫೀ ರೂ.250-00

ಆ) ವಿಭಾಗಿಸುವ  ಆಸ್ತಿ ಕೃಷಿ ಭೂಮಿಯಾಗಿದ್ದಲ್ಲಿ

ಪ್ರತಿ ಪಾಲಿಗೆ (ಷೇರಿಗೆ) ರೂ.250-00 ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಫೀ ರೂ.50-00

ಇ) ವಿಭಾಗಿಸುವ ಆಸ್ತಿ ಚರ ಆಸ್ತಿಯಾಗಿದ್ದರೆ

ಪ್ರತಿ ಪಾಲಿಗೆ (ಷೇರಿಗೆ) ರೂ.250-00 ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಫೀ ರೂ.100-00

ಈ) ವಿಭಾಗಿಸುವ ಆಸ್ತಿ ಮೇಲೆ  ಹೇಳಿದ (ಅ) (ಆ) (ಇ) ಯ ಪ್ರದೇಶದಲ್ಲಿದ್ದರೆ

ಪ್ರತಿ ಪಾಲಿಗೆ (ಷೇರಿಗೆ) (ಅ) ಅಥವಾ (ಆ) ಅಥವಾ (ಇ)ಯಲ್ಲಿ ವಿವರಿಸಿದ ಗರಿಷ್ಠ ಸ್ಟಾಂಪ್ ಡ್ಯೂಟಿ

ಪ್ರ.22

ಆಸ್ತಿಯನ್ನು ಕುಟುಂಬದ ಸದಸ್ಯರಿಗೆ ಬಾಡಿಗೆಗೆ (ಲೀಸ್) ಕೊಟ್ಟರೆ ಸ್ಟಾಂಪ್ ರಿಯಾಯಿತಿ ಇದೆಯೇ?

ಉ:

ರಿಯಾಯಿತಿ  ಇದೆ. ಆಸ್ತಿಯನ್ನು ಬಾಡಿಗೆಗೆ ಬರೆದುಕೊಡುವವರಿಗೆ ಸಂಬಂಧಿಸಿದಂತೆ ಹೆಂಡತಿ, ಗಂಡ, ತಂದೆ, ತಾಯಿ, ಮಗ, ಮಗಳು, ಸಹೋದರ, ಸಹೋದರಿಯವರಿಗೆ ಬಾಡಿಗೆಗೆ (ಲೀಸ್) ಕೊಟ್ಟಲ್ಲಿ ಗರಿಷ್ಠ ಸ್ಟಾಂಪ್ ಡ್ಯೂಟಿ ಒಂದು ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಬಾಡಿಗೆ ಕೊಡುವ ಅವಧಿಯು ನಿರಂತರವಾಗಿದ್ದರೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ಸ್ಟಾಂಪ್ ಡ್ಯೂಟಿ ಪಾವತಿಸಬೇಕಾಗುತ್ತದೆ.

ಪ್ರ.23

ಕೃಷಿ ಅಭಿವೃದ್ಧಿಗಾಗಿ ರೈತರು  ಪಡೆಯುವ ಸಾಲಕ್ಕೆ ಬರೆದುಕೊಡುವ ಅಡಮಾನ ಪತ್ರಗಳಿಗೆ ಸ್ಟಾಂಪ್ ಡ್ಯೂಟಿಯ ವಿನಾಯಿತಿ ಇದೆಯೇ? ಹಾಗಿದ್ದಲ್ಲಿ ಎಷ್ಟು?

ಉ:

ರೈತರು ವಾಣಿಜ್ಯ/ ಸಹಕಾರಿ ಹಾಗೂ ಇನ್ನಿತರ ಅಂಗೀಕೃತ ವಿತ್ತ ಸಂಸ್ಥೆಗಳಿಂದ ಪಡೆಯುವ  ಯಾವುದೇ ಮೊತ್ತದ ಸಾಲಕ್ಕೆ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಫೀ ಸಂಪೂರ್ಣ ವಿನಾಯಿತಿ ಇದೆ.

ಪ್ರ.24

ಶೈಕ್ಷಣಿಕ ಸಂಸ್ಥೆಗಳ ಕಟ್ಟಡದ ಕ್ರಯಪತ್ರದಲ್ಲಿ  ಏನಾದರೂ ವಿನಾಯಿತಿ ಇದೆಯೇ?

ಉ:

ಇಲ್ಲ. ಶೈಕ್ಷಣಿಕ ಸಂಸ್ಥೆಗಳ ಕಟ್ಟಡದ ಕ್ರಯಪತ್ರದಲ್ಲಿ  ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ವಿನಾಯಿತಿ ಇರುವುದಿಲ್ಲ.

ಪ್ರ.25

ಕೇಂದ್ರ ಸರ್ಕಾರದ ನೌಕರರು ಮನೆ ರಿಪೇರಿ ಖರೀದಿ ಇಂತಹವುಗಳಿಗೆ ಪಡೆಯುವ ಸಾಲಕ್ಕೆ ಬರೆದುಕೊಡುವ ಅಡಮಾನ ಪತ್ರಗಳಿಗೆ ಸ್ಟಾಂಪ್ ಡ್ಯೂಟಿ ರಿಯಾಯಿತಿ ಇದೆಯೇ? ಹಾಗಿದ್ದಲ್ಲಿ ಎಷ್ಟು?

ಉ:

ಸರ್ಕಾರಕ್ಕೆ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿ ಹಣದಲ್ಲಿ ಹಾಗೂ ನೋಂದಣಿ ಫೀಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಇದೆ.

ಪ್ರ.26

ರಾಜ್ಯ ಸರ್ಕಾರಿ ನೌಕರರು ಮನೆ ರಿಪೇರಿ ಖರೀದಿ ಇಂತಹವುಗಳಿಗೆ ಪಡೆಯುವ ಸಾಲಕ್ಕೆ ಬರೆದುಕೊಡುವ ಅಡಮಾನ ಪತ್ರಗಳಿಗೆ ಸ್ಟಾಂಪ್ ಡ್ಯೂಟಿ ರಿಯಾಯಿತಿ ಇದೆಯೇ? ಹಾಗಿದ್ದಲ್ಲಿ ಎಷ್ಟು?

ಉ:

ಸಂಪೂರ್ಣ  ರಿಯಾಯಿತಿ ಇದೆ. ನಿಗದಿತ ನೋಂದಣಿ ಫೀ ರೂ.100/- ಮಾತ್ರ ಆಕರಣೆ ಮಾಡಲಾಗುತ್ತದೆ.

ಪ್ರ.27

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರಿಗೆ ಸಂಬಂಧಿಸಿದಂತೆ ಸ್ಟಾಂಪ್ ಡ್ಯೂಟಿ ರಿಯಾಯಿತಿ ಇದೆಯೇ ? ಹಾಗಿದ್ದಲ್ಲಿ ಎಷ್ಟು?

ಉ:

ಎ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಣಕಾಸು ನೆರವಿನ ಮೂಲಕ ಸಾರ್ವಜನಿಕರು ಬರೆದುಕೊಡುವ ಕ್ರಯಪತ್ರಗಳಿಗೆ ಹಾಗೂ ಸದರಿ ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಪತ್ರಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕೃತ  ಪ್ರಮಾಣ ಪತ್ರವನ್ನು ಹಾಜರುಪಡಿಸಿದ್ದಲ್ಲಿ  ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಫೀ ಸಂಪೂರ್ಣ ವಿನಾಯಿತಿ ಪಡೆಯಬಹುದಾಗಿದೆ.

ಬಿ) ಮಹಾನಗರ ಸಭೆಗಳು, ನಗರ ಸಭೆಗಳು ಬರೆದುಕೊಡುವ ಖರೀದಿ ಪತ್ರಗಳಿಗೆ ದಸ್ತಾವೇಜಿನಲ್ಲಿ ನಮೂದಿಸಿದ ಮೌಲ್ಯದ ಮೇಲೆ  ಸ್ಟಾಂಪ್ ಡ್ಯೂಟಿಯನ್ನು ಪಾವತಿ ಮಾಡಬಹುದಾಗಿದೆಯೇ ಹೊರತು ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ ಇಲ್ಲ.

ಸಿ) ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡಗಳ ಅಭಿವೃದ್ಧಿ ನಿಗಮದಿಂದ ನೀಡುವ ನೇರ ಸಾಲದ ಯೋಜನೆಗಳಿಗೆ  ಬರೆದುಕೊಡುವ ದಸ್ತಾವೇಜುಗಳ ನೋಂದಣಿಗೆ ತಗಲುವ ಮುದ್ರಾಂಕ ಶುಲ್ಕದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಇದೆ. ಆದರೆ  ನೋಂದಣಿ ಫೀ ರಿಯಾಯಿತಿ ಇಲ್ಲ.

ಪ್ರ.28

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾಗಿ ಸ್ವತ್ತನ್ನು ಕಳೆದುಕೊಂಡ ಸಂತ್ರಸ್ಥ ಕುಟುಂಬದವರಿಗೆ ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯಿತಿ ಇದೆಯೇ?

ಉ:

ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಮುಳುಗಡೆಯಾಗಿ ಆಸ್ತಿಯನ್ನು ಕಳೆದುಕೊಂಡ ಸಂತ್ರಸ್ಥ ಕುಟುಂಬದವರಿಗೆ  ದೊರೆಯಬಹುದಾದ ಪರಿಹಾರ ಧನ ಮತ್ತು ಸಹಾಯ ಧನದ ಮೊತ್ತದಲ್ಲಿ ಖರೀದಿಸುವ ಆಸ್ತಿಗೆ ಪುನರ್ ವಸತಿ ಅಧಿಕಾರಿಗಳು ನೀಡುವ ಪ್ರಮಾಣ ಪತ್ರದ ಆಧಾರದ ಮೇಲೆ ನೋಂದಣಿ ಮಾಡಿಸುವಾಗ ಬರೆದುಕೊಡುವ ಪತ್ರಗಳಿಗೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕ  ಹಾಗೂ ನೋಂದಣಿ ಫೀಯಲ್ಲಿ ಸಂಪೂರ್ಣ ವಿನಾಯಿತಿ ಇದೆ. ಆದರೆ ಈ ವಿನಾಯಿತಿಯು ಸಹಾಯ ಧನ ಪಡೆದ ದಿನಾಂಕದಿಂದ ನಾಲ್ಕು ವರ್ಷದ  ಅವಧಿಗೆ  ಮಾತ್ರ ಅನ್ವಯಿಸುತ್ತದೆ.

ಪ್ರ.29

ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಹೌಸಿಂಗ್  ಬೋರ್ಡ್ ಇತ್ಯಾದಿ ಸಂಸ್ಥೆಗಳು  ಬರೆದುಕೊಡುವ ಲೀಸ್ ಕಮ್ ಸೇಲ್ ಅಗ್ರಿಮೆಂಟ್ ಹಾಗೂ ಖರೀದಿ ಪತ್ರಗಳಿಗೆ ಸ್ಟಾಂಪ್ ಡ್ಯೂಟಿಯನ್ನು ಯಾವ ರೀತಿ ಪಾವತಿಸಬೇಕು?

ಉ:

ಅ) ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಹೌಸಿಂಗ್ ಬೋರ್ಡ್, ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ, ಕೆ.ಎಸ್.ಐ..ಐ.ಡಿ.ಸಿ., ಕೆ.ಎಸ್.ಇ.ಡಿ.ಸಿ., ಎ.ಪಿ.ಎಂ.ಸಿ., ಮುನ್ಸಿಪಲ್ ಕಾರ್ಫೋರೇಷನ್, ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಈ ಸಂಸ್ಥೆಗಳು ಬರೆದುಕೊಡುವ ಲೀಸ್ ಕಮ್ ಸೇಲ್ ಅಗ್ರಿಮೆಂಟ್ ದಸ್ತಾವೇಜುಗಳಿಗೆ ಭದ್ರತಾ ಠೇವಣಿ ಹಣದ ಮೊತ್ತದ ಅನ್ವಯ ಸ್ಟಾಂಪ್ ಡ್ಯೂಟಿ  ಆಕರಣೆ  ಮಾಡಲಾಗುವುದು.

ಆ) ಸದರಿ ಸಂಸ್ಥೆಗಳು ತದ ನಂತರ ಬರೆದುಕೊಡುವ ಶುದ್ಧ ಕ್ರಯಪತ್ರಕ್ಕೆ ಈ ಹಿಂದೆ ನೋಂದಣಿಯಾದ ಲೀಸ್ ಕಮ್ ಸೇಲ್ ಅಗ್ರಿಮೆಂಟಿನ ದಸ್ತಾವೇಜಿಗೆ, ಮೇಲೆ ವಿವರಿಸಿದ ರೀತಿ ಸ್ಟಾಂಪ್ ಪಾವತಿಸದ್ದಲ್ಲಿ ಅದನ್ನು ಕಡಿಮೆಗೊಳಿಸಿ ಕ್ರಯ ದಸ್ತಾವೇಜಿನಲ್ಲಿ  ನಮೂದಿಸಿದ ಮೌಲ್ಯದಂತೆ ಹೆಚ್ಚುವರಿ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ.

ಇ) ಮೇಲೆ ವಿವರಿಸಿದ ಸಂಸ್ಥೆಗಳು ಬರೆದುಕೊಡುವ ಕ್ರಯಪತ್ರಗಳಿಗೆ ಸ್ಟಾಂಪ್ ಡ್ಯೂಟಿ ಹಾಗೂ ಅಧಿಭಾರ ಶುಲ್ಕದ ಡ್ಯೂಟಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿಯ ಮೇಲೆ ಶೇಕಡಾ 10 ರಂತೆ ಹೆಚ್ಚುವರಿ ಶುಲ್ಕ (ಸೆಸ್) ಪಾವತಿಸಬೇಕಾಗುತ್ತದೆ.

ಪ್ರ.30

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್ ಬರೆದುಕೊಡುವ ಫ್ಲಾಟ್ / ಅಪಾರ್ಟ್ ಮೆಂಟ್ಗಳ  ಲೀಸ್ ಕಮ್ ಸೇಲ್ ಅಗ್ರಿಮೆಂಟ್ ಹಾಗೂ ಖರೀದಿ ಪತ್ರಗಳಿಗೆ ಸ್ಟಾಂಪ್ ಡ್ಯೂಟಿಯನ್ನು ಯಾವ ರೀತಿ ಪಾವತಿಸಬೇಕು?

ಉ:

ಅ) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್ ಈ ಸಂಸ್ಥೆಗಳು ಫ್ಲಾಟ್ / ಅಪಾರ್ಟ್ ಮೆಂಟ್ ಗಳ ಕುರಿತು ಬರೆದುಕೊಡುವ ಲೀಸ್ ಕಮ್ ಸೇಲ್ ಅಗ್ರಿಮೆಂಟ್ ದಸ್ತಾವೇಜುಗಳಿಗೆ ಭದ್ರತಾ ಠೇವಣಿ ಹಣದ ಮೊತ್ತದ ಅನ್ವಯ ಸ್ಟಾಂಪ್ ಡ್ಯೂಟಿ ಆಕರಣೆ ಮಾಡಲಾಗುವುದು.

ಆ) ಸದರಿ ಸಂಸ್ಥೆಗಳು ತದನಂತರ ಬರೆದುಕೊಡುವ ಶುದ್ಧಕ್ರಯಪತ್ರಕ್ಕೆ ಈ ಹಿಂದೆ ನೋಂದಣಿಯಾದ ಲೀಸ್ ಕಮ್ ಸೇಲ್ ಅಗ್ರಿಮೆಂಟಿನ ದಸ್ತಾವೇಜಿಗೆ, ಮೇಲೆ ವಿವರಿಸಿದ ರೀತಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಲ್ಲಿ ಅದನ್ನು ಕಡಿಮೆಗೊಳಿಸಿ ಕ್ರಯದ ದಸ್ತಾವೇಜಿನಲ್ಲಿ ನಮೂದಿಸಿದ ಮೌಲ್ಯದನ್ವಯ ಹೆಚ್ಚುವರಿ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ.

ಇ) ಮೇಲೆ ವಿವರಿಸಿದ ಸಂಸ್ಥೆಗಳು ಬರೆದುಕೊಡುವ ಕ್ರಯಪತ್ರಗಳಿಗೆ ಸ್ಟಾಂಪ್ ಡ್ಯೂಟಿ ಹಾಗೂ ಅಧಿಭಾರ ಶುಲ್ಕದೊಂದಿಗೆ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ಸ್ಟಾಂಪ್ ಡ್ಯೂಟಿಯ ಮೇಲೆ ಶೇಕಡಾ 10ರಂತೆ ಹೆಚ್ಚುವರಿ ಶುಲ್ಕ (ಸೆಸ್) ಪಾವತಿಸಬೇಕಾಗುತ್ತದೆ.

ಇತ್ತೀಚಿನ ನವೀಕರಣ​ : 06-03-2021 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080